ರೂಪ ಗೋಸ್ವಾಮಿ
1488-1588. ಬಂಗಾಲದ ಕೃಷ್ಣ ಭಕ್ತ. ಚೈತನ್ಯ ಮಹಾಪ್ರಭುವಿನ ಅಚಿಂತ್ಯ ಭೇದಾಭೇದ ಸಿದ್ಧಾಂತದ ಭಾಷ್ಯಕಾರ, ಶ್ರೇಷ್ಠ ವಿದ್ವಾಂಸ.
ಈತನ ಪೂರ್ವಜರು ಕರ್ನಾಟಕದವರು ಎಂದ ಹೇಳಲಾಗುತ್ತದೆ. ಬಂಗಾಲದ ಮಾಲ್‍ದಹ್ ಜಿಲ್ಲೆಯ ರಾಮ್ ಕೇಲಿ ಎಂಬ ಹಳ್ಳಿಯಲ್ಲಿ ನೆಲೆಸಿದ್ದ ಇವನ ತಂದೆ ಕುಮಾರದೇವ ಕರ್ನಾಟಕದ ಸರ್ವಜ್ಞನ ವಂಶಜ ಎನ್ನಲಾಗಿದೆ. ತಾಯಿ ರೇವತಿದೇವಿ. ನೌಹಾಟಿಯ ಪ್ರಸಿದ್ಧ ಪಂಡಿತ ಸರ್ವದಾನಂದ ರೂಪ ಗೋಸ್ವಾಮಿ ಇವನ ಗುರು. ಅವರಿಂದ  ಸಂಸ್ಕøತ ಶಿಕ್ಷಣವನ್ನು ಪಡೆದ. ಸಪ್ತಗ್ರಾಮದ ಫಕೃದ್ದೀನ್ ಈತನಿಗೆ ಫಾರಸಿಯನ್ನು ಹೇಳಿಕೊಟ್ಟ.

ಈತನ ಕಾಲದಲ್ಲಿ ಬಂಗಾಲವನ್ನು ಹುಸೇನ್ ಶಾಹ್ ಆಳುತ್ತಿದ್ದ. ಈತ ರಾಜನಿಗೆ ಬೇಕಾದ ವ್ಯಕ್ತಿಯಾಗಿದ್ದ. ಆತನ ದರ್ಬಾರಿನಲ್ಲಿ ವಿಶಿಷ್ಟ
ಸ್ಥಾನ ಪಡೆದುಕೊಂಡು ಈತ ರಾಜ್ಯಕಾರ್ಯದಲ್ಲಿಯೂ ಸಹಕರಿಸುತ್ತಿದ್ದ. ಈತನ ಸೇವೆಗೆ ಮನ್ನಣೆಯಿತ್ತು ರಾಜ ಈತನಿಗೆ ದಬೇರ್ ಖಾಸ್ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದ.
ಈತ ಲೌಕಿಕದಲ್ಲಿದ್ದು ವಿಶಿಷ್ಟ ವ್ಯಕ್ತಿ ಎನ್ನಿಸಿಕೊಂಡಿದ್ದ. ಐಶ್ವರ್ಯದ ಕೊರತೆಯಿರದಿದ್ದರೂ ಆಧ್ಯಾತ್ಮದ ಕಡೆ ಈತನ ಸೆಳೆತವಿತ್ತು. ಆ ದಿನಗಳಲ್ಲಿ ಚೈತನ್ಯ ಮಹಾಪ್ರಭುವಿನ ಕೃಷ್ಣಭಕ್ತಿಯ ಪ್ರಚಾರ ಅಗಾಧವಾಗಿ ನಡೆದಿತ್ತು. ಒಮ್ಮೆ ಈತ ಚೈತನ್ಯ ಮಹಾಪ್ರಭುವಿಗೆ ಪತ್ರ ಬರೆದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಪ್ರಾರ್ಥಿಸಿಕೊಂಡಿದ್ದರೂ ಅದಕ್ಕೆ ಉತ್ತರವಾಗಿ ಚೈತನ್ಯ ಪ್ರಭುಗಳು ರಾಜಕೀಯ ಹಾಗೂ ಲೌಕಿಕದಲ್ಲಿದ್ದು ಕೊಂಡೇ ಭಗವತ್ ಸಂಕೀರ್ತನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳು ವಂತೆ ಸೂಚಿಸಿದ್ದರು. ಒಮ್ಮೆ ಚೈತನ್ಯ ಮಹಾಪ್ರಭುವೇ ಇವನನ್ನು ಭೇಟಿಯಾಗುವ ಉದ್ದೇಶದಿಂದ ಹುಸೇನ್‍ಶಾಹ್‍ನ ರಾಜಧಾನಿಯಾದ ಗೌಡ್ ಪ್ರದೇಶದ ಮೂಲಕ ಬೃಂದಾವನಕ್ಕೆ ಹೋಗುವ ಕಾರ್ಯಕ್ರಮವನ್ನು ಹಾಕಿಕೊಂಡರು. ಗೌಡ್ ಪ್ರದೇಶಕ್ಕೆ ಬಂದು ಅಲ್ಲಿಯ ನದಿ ದಂಡೆಯ ಮೇಲೆ ಬಿಡಾರಮಾಡಿದರು. ಈತ ಚೈತನ್ಯ ಮಹಾಪ್ರಭುಗಳ ಬಳಿ ಹೋಗಿ ದೀಕ್ಷೆ ಕೊಡುವಂತೆ ಪ್ರಾರ್ಥಿಸಿದ. ದೀಕ್ಷೆ ಪಡೆದುಕೊಂಡ ಅನಂತರ ತನ್ನ ಸರ್ವಸ್ವವನ್ನು ಬಡಬಗ್ಗರಿಗೆ ದಾನಮಾಡಿ ವೈರಾಗ್ಯ ಸ್ವೀಕರಿಸಿದ. ಕೃಷ್ಣಭಕ್ತಿ, ಚೈತನ್ಯ ಭಕ್ತಿ ಸಿದ್ಧಾಂತದ ಪ್ರಚಾರ, ಭಕ್ತಿಯನ್ನು ಕುರಿತಂತೆ ಶಾಸ್ತ್ರಗ್ರಂಥಗಳ ರಚನೆ ಹಾಗೂ ಬ್ರಜಭೂಮಿಯಲ್ಲಿ ಲುಪ್ತಗೊಂಡ ತೀರ್ಥಸ್ಥಾನಗಳ ಅನ್ವೇಷಣೆ ಮುಂತಾದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ಬೃಂದಾವನ ಈತನ ಕಾರ್ಯಕ್ಷೇತ್ರವಾಯಿತು. ಕೃಷ್ಣರಾಧೆಯರ ಪ್ರೇಮದ ಅಮರಗಾಯಕನಾಗಿ ಆತನ ಲೀಲೆಗಳ ಸಂಕೀರ್ತಕನಾದ.
ಈತನ ಕೃತಿಗಳು ಸಂಸ್ಕøತದಲ್ಲಿವೆ. ಉಜ್ವಲ-ನೀಲಮಣಿ, ಹಂಸದೂತ, ಲಲಿತ ಮಾಧವ, ಹರಿಭಕ್ತಿ ರಸಾಮೃತ ಸಿಂಧು, ವಿದಗ್ಧ ಮಾಧವ, ನಾಟಕ ಚಂದ್ರಿಕಾ ಮುಂತಾದವು ಈತನ ಕೃತಿಗಳು. ಈ ಕೃತಿಗಳಲ್ಲಿ ಕೃಷ್ಣನ ಚರಿತೆ ಹಾಗೂ ಆತನ ಲೀಲಾ  ವಿನೋದಗಳು ಮುಪ್ಪುರಿಗೊಂಡಿವೆ. ಈತ 1588ರಲ್ಲಿ ಬೃಂದಾವನದಲ್ಲಿ ನಿಧನನಾದ.
	(ಟಿ.ಎಚ್.ಐ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ